ಪೋಡೋಫಿಲ್ಲಿನ್ -
	ಪೋಡೊಫಿಲ್ಲಿನ್, ಪೋಡೋಫಿಲ್ಲಮ್ ಪೆಲ್ಟಾಟಮ್ ಮತ್ತು ಪೋಡೊಫಿಲ್ಲಮ್ ಹೆಕ್ಸಾಂಡ್ರಮ್ ಗಿಡಗಳಿಂದ ಸಿದ್ಧಪಡಿಸಿದ ರಾಳವಸ್ತು. ಇದು ಲೋಳೆಪೊರೆಯಲ್ಲಿ ತೀವ್ರತರ ಕೆರಳಿಕೆ ಉಂಟುಮಾಡಿ ಕರುಳ ಚಲನೆಯನ್ನು ಚುರುಕುಗೊಳಿಸುತ್ತದೆ. ಈ ಗುಣ ವಿಶೇಷದಿಂದಾಗಿ ಪೋಡೊಫಿಲ್ಲಿನ್ ವಿರೇಚಕ (ಜುಲಾಬು) ವಸ್ತುವಾಗಿದ್ದರೂ ದೇಹದ ಮೇಲೆ ಬೀರುವ ವಿಷಾರಿ ಪ್ರಭಾವದಿಂದಾಗಿ ಇದನ್ನು ವಿರೇಚಕವಾಗಿ ಬಳಸುವುದಿಲ್ಲ.  ಇದರಲ್ಲಿಯ ಕೆರಳಿಕೆಯ ಸಸ್ಯಜನ್ಯರಾಳ ಪ್ರಬಲವಾದ ಭೇದಿ ಮದ್ದಾದರೂ ಇದನ್ನು ಔಷಧಿಯಾಗಿ ಉಪಯೋಗಿಸುವುದಿಲ್ಲ.  ಒಂದು ಗ್ರಾಮ್ ಪ್ರಮಾಣದ ಈ ವಸ್ತುವಿನ ಸೇವನೆ ಸಾವನ್ನುಂಟುಮಾಡುತ್ತದೆ.  ಅಜ್ಞಾನದಿಂದ ಪೋಡೊಫಿಲ್ಲಿನ್ ಸೇವಿಸಿದಾಗ, ಬಾಯಿ ಗಂಟಲಲ್ಲಿ ಉರಿ, ಅನ್ನನಾಳ ಜಠರಕೋಶದಿಂದ ರಕ್ತೋದ್ರೇಕ ವಾಂತಿ, ಭೇದಿ, ನೀರ್ಗಳೆತ, ವಿಪರೀತ ಸುಸ್ತು ತೋರಿ ಬಂದು ರೋಗಿ ತಲ್ಲಣಿಸಿ ಸ್ಮøತಿ ತಪ್ಪಿ ಸಾವು ಹೊಂದುತ್ತಾನೆ.  ಪೋಡೊಫಿಲ್ಲಿನ್ ಕೋಶಗಳ ಮೇಲೆ ಬೀರುವ ವಿಷಪ್ರಭಾವ ಗಮನಾರ್ಹವಾಗಿದೆ.  ಇದು ಅಸಹಜ ರೀತಿಯಲ್ಲಿ ಭಿನ್ನಗೊಳ್ಳುತ್ತಿರುವ ಕೋಶಗಳ ಜೀವರಸ ಮತ್ತು ಕೇಂದ್ರಕದ ಮೇಲೆ ತನ್ನ ಪ್ರಭಾವ ಬೀರುತ್ತದೆ.  ಇದರಿಂದಾಗಿ ಈ ವಸ್ತುವನ್ನು ಚರ್ಮದಲ್ಲಿ ಬೆಳೆಯುವ ಚೂಚುಕ ಗಂತಿ, ಮೃದು ನರೂಲಿ ಮತ್ತು ಉಣ್ಣೆಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.  ಜನನೇಂದ್ರಿಯಗಳ ಮೇಲೆ ಮತ್ತು ಗುದದ್ವಾರದ ಸುತ್ತಮುತ್ತು ತೋರಿ ಬರುವ ಚಿಕ್ಕ ಚಿಕ್ಕ ಚರ್ಮ ಗಂತಿಗಳ ಚಿಕಿತ್ಸೆಯಲ್ಲಿ ಪೋಡೊಫಿಲ್ಲಿನ್ ಪ್ರಭಾವಶಾಲಿ.  ಟಿಂಚರ್ ಬೆಂಜೋóಯಿನಿನಲ್ಲಿ ಮಿಶ್ರ ಮಾಡಿದ 25% ಪೋಡೊಫಿಲ್ಲಿನ್ ರಾಳದಲ್ಲಿ ಹತ್ತಿಯನ್ನು ಸುತ್ತಿದ ಇಲ್ಲವೇ ಸುತ್ತದ ಕಡ್ಡಿಯೊಂದನ್ನು ಅದ್ದಿ ಅದನ್ನು ಗಂತಿಯ ಮೇಲೆ ಸುತ್ತಣ ಆರೋಗ್ಯಕರ ಚರ್ಮವನ್ನು ಮುಟ್ಟದಂತೆ ಲೇಪಿಸಬೇಕು.  ಅಸಹಜ ಬೆಳೆವಣಿಗೆ ಉದುರಿಬೀಳುವಂತೆ ಮಾಡುವಲ್ಲಿ ಪೋಡೊಫಿಲ್ಲಿನ್ ಯಶಸ್ವಿಯಾಗುತ್ತದೆ.
(ಪಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ